ಆದಿಗ್ರಂಥ
ಸಿಖ್ ಮತೀಯರ ಪವಿತ್ರ ಧಾರ್ಮಿಕ ಗ್ರಂಥ. ಐದನೆಯ ಗುರುವಾದ ಅರ್ಜನ್ ಮಲ್ (1581-1606) ಮತ ತತ್ವಗಳನ್ನು ಕ್ರೋಡೀಕರಿಸಿ ಎಲ್ಲವನ್ನೂ ಬರೆಸಿಟ್ಟ. ಇದರಲ್ಲಿ ಮೊದಲ ನಾಲ್ಕು ಗುರುಗಳ (ನಾನಕ್, ಅಂಗದ್, ಅಮರ್‍ದಾಸ್, ರಾಮದಾಸ್) ಉಪದೇಶಗಳನ್ನಲ್ಲದೆ, ಜಯದೇವನ ಕಾಲದಿಂದೀಚಿನ ಹಿಂದೂ ಮತ್ತು ಮುಸ್ಲಿಂ ಸಂತರ ಉಪದೇಶಗಳನ್ನೂ ಸೇರಿಸಿದ. ಆಗಲೇ ಸಿಖ್‍ಮತ ಪಂಜಾಬಿನಲ್ಲೆಲ್ಲ ವ್ಯಾಪಕವಾಗಿ ಹರಡಿದ್ದು. ಗುರು ತೇಜ್‍ಬಹದ್ದೂರ್‍ನ ಉಪದೇಶಗಳನ್ನು ಅವನ ತರುವಾಯ ಬಂದ ಗೋವಿಂದಸಿಂಗ್ ಆದಿಗ್ರಂಥಕ್ಕೆ ಸೇರಿಸಿದ. ತನ್ನ ತರುವಾಯ ಈ ಗ್ರಂಥವೇ ಗುರುವಿನ ಸ್ಥಾನವನ್ನು ಆಕ್ರಮಿಸುತ್ತದೆ ಎಂದು ಸಾರಿದ. ಗ್ರಂಥದ ಭಾಷೆ ಪಂಜಾಬಿ. ಪಾರಸಿ, ಅರಬ್ಬೀ, ಮರಾಠೀ ಪದಪ್ರಯೋಗಗಳೂ ಇವೆ. ಗ್ರಂಥದ ಮುಖ್ಯ ವಿಷಯವಿಷ್ಟು : ಐಹಿಕ ಕರ್ತವ್ಯಗಳನ್ನು ಕಡೆಗಣಿಸಕೂಡದು. ಜೀವನದಲ್ಲಿ ಉಚ್ಚ ನೈತಿಕಮಟ್ಟವನ್ನು ಹೊಂದಿರಬೇಕು. ಇದು ಮತ್ತು ಜನಸೇವೆ, ಇವೆರಡರಲ್ಲೇ ಜೀವನದ ಸಾರ್ಥಕತೆ. ಮಮಕಾರವನ್ನು ಸಂಪೂರ್ಣವಾಗಿ ಕಳೆದುಕೊಂಡಾಗಲೇ ಜೀವ ದೇವನೊಂದಿಗೆ ಐಕ್ಯ ಹೊಂದುವುದು. 

(ಕೆ.ಕೆ.; ಎಸ್.ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ